Share this post

73ನೇ ಮತ್ತು 74ನೇ ಭಾರತೀಯ ಸಂವಿಧಾನದ ತಿದ್ದುಪಡಿಗಳು, ಕ್ರಮವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಥಳೀಯ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಈ ತಿದ್ದುಪಡಿಗಳು ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದ ಮೂಲಕ ಅಂದರೆ ಸ್ಥಳೀಯ ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯ ಮೂಲಕ ಅಭಿವೃದ್ಧಿಯನ್ನು ಸಾಧಿಸಲು ಉದ್ದೇಶಿಸಿದೆ. ಪ್ರಜಾಸತ್ತಾತ್ಮಕ ವಿಕೇಂದ್ರೀಕರಣವು ನೀತಿ ನಿರೂಪಣೆಯ (policy) ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ನಾಗರಿಕರ ಸಹಾಯವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ; ನಾಗರಿಕರು ತಮ್ಮ ಜೀವನದ ಮೇಲೆ ನೇರವಾಗಿ ಪ್ರಭಾವ ಬೀರುವ ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರಲು ಅಧಿಕಾರ ನೀಡುತ್ತದೆ; ಮತ್ತು ನೀತಿ ರಚನೆ ಪ್ರಕ್ರಿಯೆಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ – ಇವು ಸಮಗ್ರ ಪ್ರಾದೇಶಿಕ ಪ್ರಗತಿಗೆ ಅವಶ್ಯಕವಾಗಿದೆ.
74 ನೇ ತಿದ್ದುಪಡಿಯು ಮಂಗಳೂರು ಸಿಟಿ ಕಾರ್ಪೊರೇಷನ್ (MCC) ನಂತಹ ನಗರ ಸ್ಥಳೀಯ ಸಂಸ್ಥೆಗಳಿಗೆ (ULBs) ಅನ್ವಯಿಸುತ್ತದೆ.
ಕರ್ನಾಟಕ ರಾಜ್ಯವು ಈ ತಿದ್ದುಪಡಿಯ ತತ್ವಗಳನ್ನು ಅಳವಡಿಸಿ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ (ತಿದ್ದುಪಡಿ) ಕಾಯಿದೆ, 2011 [KMC (Amdt) ಕಾಯ್ದೆ, 2011] ಅನ್ನು ಜಾರಿಗೊಳಿಸಿತು. ಈ ಕಾಯಿದೆಯು MCC ಸೇರಿದಂತೆ ಎಲ್ಲಾ ನಗರ ಮುನ್ಸಿಪಲ್ ಕಾರ್ಪೊರೇಶನ್‌ಗಳು ಏರಿಯಾ ಸಭೆ-ವಾರ್ಡ್ ಸಮಿತಿ (AS-WC) ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸುತ್ತದೆ. ಈ ವ್ಯವಸ್ಥೆಯು ಏರಿಯಾ ಸಭೆಗಳು (ASs) ಮತ್ತು ವಾರ್ಡ್ ಸಮಿತಿಗಳು (WCs) ಮತ್ತು ಅವುಗಳ ರಚನೆ, ಸಂಯೋಜನೆ, ಸಂವಿಧಾನ ಮತ್ತು ಕಾರ್ಯಗಳನ್ನು ವ್ಯಾಖ್ಯಾನಿಸುತ್ತದೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ಸ್ (ವಾರ್ಡ್ ಸಮಿತಿ) ನಿಯಮ, 2016 [KMC (WC) ನಿಯಮ, 2016] WC ಸಭೆಗಳನ್ನು ನಡೆಸುವ ನಿಯಮಗಳನ್ನು ಮತ್ತಷ್ಟು ನಿರ್ದಿಷ್ಟಪಡಿಸುತ್ತದೆ.
ಮಂಗಳೂರು ನಗರವನ್ನು (MMC ಮಿತಿಗಳು) 60 ಆಡಳಿತ ಘಟಕಗಳಾಗಿ ವಿಂಗಡಿಸಲಾಗಿದೆ, ಇದನ್ನು ವಾರ್ಡ್‌ಗಳು ಎಂದು ಕರೆಯಲಾಗುತ್ತದೆ, ಪ್ರತಿಯೊಂದಕ್ಕೂ ಅದರ ಅನುಗುಣವಾದ ಭೌಗೋಳಿಕ ಪ್ರದೇಶವನ್ನು ಹೆಸರಿಸಲಾಗಿದೆ ಮತ್ತು 1 ರಿಂದ 60ರವರೆಗಿನ ಸಂಖ್ಯೆಯನ್ನು ನೀಡಲಾಗಿದೆ (ಉದಾಹರಣೆಗೆ, ಸುರತ್ಕಲ್ ಪಶ್ಚಿಮವು ವಾರ್ಡ್ ಸಂಖ್ಯೆ 1; ಬೆಂಗ್ರೆಯು ವಾರ್ಡ್ ಸಂಖ್ಯೆ 60, ಇತ್ಯಾದಿ). ಪ್ರತಿ ವಾರ್ಡ್‌ನ ನೋಂದಾಯಿತ ಮತದಾರರು ತಮ್ಮ ವಾರ್ಡ್ ಕಾರ್ಪೊರೇಟರ್ (ಕೌನ್ಸಿಲರ್) ಅನ್ನು ಆಯ್ಕೆ ಮಾಡುತ್ತಾರೆ, ಒಟ್ಟು 60 ಕಾರ್ಪೊರೇಟರ್‌ಗಳನ್ನು ಒಳಗೊಂಡಿರುವ ಕಾರ್ಪೊರೇಷನ್‌ನ ಶಾಸಕಾಂಗ ಸಂಸ್ಥೆಯ ಭಾಗವಾಗಿದೆ.
KMC (Amdt) ಕಾಯಿದೆ, 2011ರ ಪ್ರಕಾರ, ಒಂದು ವಾರ್ಡ್ ಹೊರತುಪಡಿಸಿ,ಮಂಗಳೂರು ನಗರದ ಪ್ರತಿ ವಾರ್ಡನ್ನು ಎರಡು ಭೌಗೋಳಿಕ ಏರಿಯಾಗಳಾಗಿ ವಿಂಗಡಿಸಲಾಗಿದೆ. ಒಂದು ವಾರ್ಡನ್ನು ಮೂರನ್ನಾಗಿ ವಿಂಗಡಿಸಲಾಗಿದೆ. ಆದ್ದರಿಂದ, ನಗರವು ಒಟ್ಟು 121 ಏರಿಯಾಗಳನ್ನು ಹೊಂದಿದೆ.
ಒಂದು ಏರಿಯಾ ಸಭೆಯು (AS) ಏರಿಯಾದ ನೋಂದಾಯಿತ ಮತದಾರರನ್ನು ಒಳಗೊಂಡಿರುತ್ತದೆ. ಅವರಲ್ಲೊಬ್ಬರು ಏರಿಯಾ ಸಭೆಯ ಪ್ರತಿನಿಧಿ (ASR) ಆಗಿರುತ್ತಾರೆ. ಪ್ರದೇಶದ ಒಟ್ಟಾರೆ ಅಭಿವೃದ್ಧಿಯ ಕುರಿತು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ASಗಳು ಕನಿಷ್ಠ ಮೂರು ತಿಂಗಳಿಗೊಮ್ಮೆ ಏರಿಯಾ ಸಭೆ meeting ಮಾಡಬೇಕಾಗುತ್ತದೆ. ಏರಿಯಾ ಸಭೆ meetingಗಳಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ವಾರ್ಡ್ ಸಮಿತಿಗಳಿಗೆ (WCs) ರವಾನಿಸಲಾಗುತ್ತದೆ.
ಪ್ರತಿ ವಾರ್ಡ್ ಸಮಿತಿಯು ವಾರ್ಡ್ ಕಾರ್ಪೊರೇಟರ್ ಮತ್ತು ವಾರ್ಡ್‌ನ ನೋಂದಾಯಿತ ಮತದಾರರಿಂದ MCC ಆಯುಕ್ತರಿಂದ ನಾಮನಿರ್ದೇಶನಗೊಂಡ ಹತ್ತು WC ಸದಸ್ಯರನ್ನು ಒಳಗೊಂಡಿರುತ್ತದೆ. ವಾರ್ಡ್ ಸಮಿತಿಗಳು ತಿಂಗಳಿಗೊಮ್ಮೆಯಾದರೂ ಸಭೆ ಸೇರಿ ವಾರ್ಡ್‌ನ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರ್ಣಯಗಳನ್ನು ಕೈಗೊಳ್ಳಬೇಕು.
ಏರಿಯಾ ಸಭೆ ಮತ್ತು ವಾರ್ಡ್ ಸಮಿತಿಯ ನಿರ್ಧಾರಗಳನ್ನು ಅನುಮೋದಿಸಲು ಮಾಸಿಕ ಕೌನ್ಸಿಲ್ ಸಭೆಗಳಲ್ಲಿ ಮಂಡಿಸಲಾಗುತ್ತದೆ.
ಮಂಗಳೂರಿನಲ್ಲಿ AS-WC ವ್ಯವಸ್ಥೆಯ ಅನುಷ್ಠಾನವು ಕೇವಲ ಭಾಗಶಃ ಮಾತ್ರ. MCC ಈಗಾಗಲೇ ಎಲ್ಲಾ 60 ವಾರ್ಡ್‌ಗಳಲ್ಲಿ WCಗಳನ್ನು ರಚಿಸಿದೆ. ಮಾರ್ಚ್ 2022 ರಲ್ಲಿ WC ಸಭೆಗಳು ಪ್ರಾರಂಭವಾದವು. MCC 121 ಏರಿಯಾಗಳನ್ನು ಸಹ ಗುರುತಿಸಿದೆ. ಏರಿಯಾ ಸಭೆ ಮತ್ತು ವಾರ್ಡ್ ಸಮಿತಿಯ ಸಭೆಗಳನ್ನು ನಡೆಸುವ ಉಪ-ಕಾನೂನುಗಳು, ಏರಿಯಾ ಸಭೆ ಮತ್ತು ವಾರ್ಡ್ ಸಮಿತಿಯಗಳ ಸಂವಿಧಾನ ಮತ್ತು ASRಗಳ ನಾಮನಿರ್ದೇಶನವನ್ನು ಕಾರ್ಯಗತಗೊಳಿಸಲು ಇನ್ನೂ ಉಳಿದಿದೆ. ವಾರ್ಡ್ ಸಮಿತಿ ಸಭೆಗಳು ನಿಷ್ಪರಿಣಾಮಕಾರಿಯಾಗಿರುವುದಕ್ಕೆ ಈ ಭಾಗಶಃ ಅನುಷ್ಠಾನವನ್ನು ದೂಷಿಸಲಾಗಿದೆ. ಆದಾಗ್ಯೂ, ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಕೌನ್ಸಿಲ್ ಇತ್ತೀಚೆಗೆ ಕೆಲವು ನಿರ್ಣಯಗಳನ್ನು ಅಂಗೀಕರಿಸಿದೆ.

KMC (Amdt) ಕಾಯಿದೆ, 2011, ಮತ್ತು KMC (WC) ನಿಯಮ, 2016, ಇಲ್ಲಿ ಕ್ಲಿಕ್ ಮಾಡಿ.


Share this post