ಮರಕಡ, ಜೂ.12: ವೀ ದಿ ಪೀಪಲ್ ಅಸೋಸಿಯೇಶನ್ ಸ್ವಯಂ ಸೇವಾ ಸಂಘಟನೆ ವತಿಯಿಂದ ನಗರದ ಮರಕಡದಲ್ಲಿ ಸುರಕ್ಷಿತ ಕುಡಿಯುವ ನೀರು ಮತ್ತು ಕಸ ವಿಲೇವಾರಿ ವಿಚಾರದ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯಾಗಾರ ಹಮ್ಮಿಕೊಂಡಿತು.
ಕೆಎಚ್‌ಬಿ ಕಾಲನಿಯ ಕ್ಷೇಮಾಭ್ಯುದಯ ಸಂಘದ ಸಹಯೋಗದಲ್ಲಿ ರೋಟರಿ ಬಾಲಭವನದಲ್ಲಿ ನಡೆದ ಸಮಾರಂಭದಲ್ಲಿ 60 ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ರಾಯಪ್ಪ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ನಾಗರಿಕರ ಸಹಕಾರದ ಮಹತ್ವವನ್ನು ಪ್ರಸ್ತಾವಿಸಿ, ಪಾಲಿಕೆ ವಿಧಿಸಿರುವ ಕಸದ ತೆರಿಗೆಯಲ್ಲಿ ಶೇ.50ರಷ್ಟು ವಿನಾಯಿತಿ ಪಡೆಯುವುದು ಸಹಿತ ಮನೆಯಲ್ಲೇ ಕಸವನ್ನು ಗೊಬ್ಬರವಾಗಿಸುವುದರಿಂದ ಆಗುವ ಹಲವಾರು ಪ್ರಯೋಜನಗಳ ಬಗ್ಗೆ ಬೆಳಕು ಚೆಲ್ಲಿದರು.
ವೀ ದಿ ಪೀಪಲ್ ಅಸೋಸಿಯೇಶನ್‌ನ ಸದಸ್ಯ ಪದ್ಮನಾಭ ಉಳ್ಳಾಲ ಅವರು ಪೈಪ್ ಮತ್ತು ಮೂರು-ಮಡಕೆ ಕಾಂಪೋಸ್ಟಿಂಗ್ ವಿಧಾನಗಳ ಬಗ್ಗೆ ಒಳನೋಟವುಳ್ಳ ವೀಡಿಯೋ ಪ್ರದರ್ಶನವನ್ನು ನೀಡಿದರು. ಸಾವಯವ ಕೃಷಿ ಕುರಿತು ಸುನಿತಾ ಹರೀಶ್ ವಿವರಿಸಿದರು. ಸಂಘಟನೆ ಕೋಶಾಧಿಕಾರಿ ಸುರೇಶ್ ನಾಯಕ್ ಅವರು ಸಂಘದ ಉದ್ದೇಶಗಳನ್ನು ವಿವರಿಸಿದರು. ಕೆಎಚ್‌ಬಿ ಕಾಲನಿ ಕ್ಷೇಮಾಭ್ಯುದಯ ಸಂಘದ ಅಧ್ಯಕ್ಷ ಬಿ.ಎಂ. ಆಚಾರ್ ಹಾಗೂ ವೀ ದಿ ಪೀಪಲ್ ಕಾರ್ಯಕಾರಿಣಿ ಸದಸ್ಯ ಗ್ಲಾಡಿಸ್ ಮೊಂತೇರೋ ಭಾಗವಹಿಸಿದ್ದರು.